ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ಅಭ್ಯಾಸ ಮಾಡಿದ ಯುವ ರಂಗಕರ್ಮಿಗಳಿಗೆ ಫೆಲೋಷಿಪ್

ನೀನಾಸಮ್ ರಂಗಶಿಕ್ಷಣಕೇಂದ್ರದಿಂದ ಇದುವರೆಗೆ ೬೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತರಬೇತಿಗೊಳಿಸಿದ್ದು ಇವರಲ್ಲಿ ಬಹುಪಾಲು ಜನರು ರಂಗಭೂಮಿ ಮತ್ತು ಬೇರೆ ಮಾಧ್ಯಮಗಳಲ್ಲಿ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ.  ಅವರಲ್ಲಿ ಹೊಸ ಪ್ರತಿಭೆಗಳನ್ನು ಗುರುತಿಸಿ ಅವರು ಕೈಗೊಳ್ಳಲು ಬಯಸಿರುವ ನಿರ್ದಿಷ್ಟ ಕಾರ್ಯಯೋಜನೆಯೊಂದಕ್ಕೆ ಧನಸಹಾಯ ನೀಡುವುದು ಈ ಫೆಲೋಷಿಪ್‌ನ ಉದ್ದೇಶ.  ಕನ್ನಡ ರಂಗಭೂಮಿಯಲ್ಲಿ ವೃತ್ತಿಪರತೆಯನ್ನು ಸಾಧಿಸಲು ಪ್ರಯತ್ನಿಸುತ್ತಿರುವ ಯುವ ಪ್ರತಿಭೆಗಳಿಗೆ ಸಹಾಯ ಮಾಡುವ ಮೂಲಕ ರಂಗಭೂಮಿಯಲ್ಲಿ ಹೊಸಬರಿಗೆ ಪ್ರೋತ್ಸಾಹ ನೀಡುವುದು – ಈ ಫೆಲೋಷಿಪ್‌ನ ವಿಶಾಲ ಗುರಿ. 

ನೀನಾಸಮ್ ಪ್ರತಿಷ್ಠಾನವು ಬಿ.ಸಿ.ಎಸ್. ಅಯ್ಯಂಗಾರ್ ಫೆಲೋಷಿಪ್ ೨೦೨೨ ಮತ್ತು ಪ್ರಮೀಳಾ ಸ್ವಾಮಿ ಫೆಲೋಷಿಪ್ ೨೦೨೨ಗಳನ್ನು ಈ ಮೂವರಿಗೆ ನೀಡಲು ನಿರ್ಧರಿಸಿದೆ:

೧. ಶ್ವೇತ ಶ್ರೀನಿವಾಸ, ಬೆಂಗಳೂರು (ಪ್ರಮೀಳಾ ಸ್ವಾಮಿ ಫೆಲೋಷಿಪ್ ೨೦೨೨)

೨. ಸೈಯದ್ ಸಾದಿಕ್ ಎಸ್. ರಿಯಾಜ್, ಹೊಸಪೇಟೆ (ಬಿ.ಸಿ.ಎಸ್. ಅಯ್ಯಂಗಾರ್ ಫೆಲೋಷಿಪ್ ೨೦೨೨)

೩. ಸಂತೋಷ್ ಕುಮಾರ್ ಮಳ್ಳಿ, ಗದಗ (ಬಿ.ಸಿ.ಎಸ್. ಅಯ್ಯಂಗಾರ್ ಫೆಲೋಷಿಪ್ ೨೦೨೨)

ಪ್ರತಿ ಫೆಲೋಷಿಪ್‌ನ ಮೊತ್ತ ರೂ. ೫೦,೦೦೦

Ninasam Pratishtana announces the BCS Iyengar Fellowship 2022 and Prameela Swamy Fellowship 2022 to the following:

  1. Shwetha Srinivasa, Bangalore (Prameela Swamy Fellowship 2022)
  2. Syed Sadiq S. Riyaz, Hospet (BCS Iyengar Fellowship 2022)
  3. Santoshkumar Malli, Gadag (BCS Iyengar Fellowship 2022)

Each fellowship consists of Rs. 50,000

 

ಫೆಲೋಷಿಪ್‌ನ ವಿವರಗಳು:

  • ‘ಬಿ.ಸಿ.ಎಸ್. ಅಯ್ಯಂಗಾರ್ ಫೆಲೋಷಿಪ್’ ಮತ್ತು `ಪ್ರಮೀಳಾ ಸ್ವಾಮಿ ಫೆಲೋಷಿಪ್‘ ಎಂಬ ಹೆಸರುಗಳಲ್ಲಿ ಈ ಸಹಾಯವನ್ನು ನೀಡಲಾಗುತ್ತದೆ.
  • ನೀನಾಸಮ್ ಸಂಸ್ಥೆಯ ಹಿತೈಷಿಗಳಾದ ಶ್ರೀ. ಬಿ.ಸಿ.ಎಸ್. ಅಯ್ಯಂಗಾರ್ ಮತ್ತು ಶ್ರೀಮತಿ ದೀಪಾ ಗಣೇಶ್ ಅವರು ಕ್ರಮವಾಗಿ ಈ ಎರಡು ಯೋಜನೆಗಳ ಪ್ರೇರಕರಾಗಿದ್ದು ಅವರು ಇದರ ಆರ್ಥಿಕ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಉಳಿದಂತೆ, ಈ ಫೆಲೋಷಿಪ್‌ಗಳ ಪ್ರಕಟಣೆ, ಪ್ರಚಾರ, ಆಯ್ಕೆ, ನಿರ್ವಹಣೆ ಮತ್ತು ಮೌಲ್ಯಮಾಪನಗಳೆಲ್ಲದರ ಕಾರ್ಯಗಳನ್ನು ನೀನಾಸಮ್ ಪ್ರತಿಷ್ಠಾನವು ನಿರ್ವಹಿಸುತ್ತದೆ.
  • ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ಉತ್ತೀರ್ಣರಾದ ಮತ್ತು ೨೦೨೨ ಆಗಸ್ಟ್ ತಿಂಗಳಿಗೆ ೪೦ ವರ್ಷ ವಯಸ್ಸು ಮೀರಿರದ ಯಾರೂ ಈ ಫೆಲೋಷಿಪ್‌ಗೆ ಬೇಡಿಕೆ ಸಲ್ಲಿಸಬಹುದು. ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ತರಬೇತಿ ಪಡೆಯದವರಿಗೆ ಈ ಫೆಲೋಷಿಪ್ ನೀಡಲಾಗುವುದಿಲ್ಲ.
  • ಆಯಾ ರಂಗಕರ್ಮಿಯು ಮಾಡಬೇಕೆಂದು ಬಯಸಿರುವ ನಿರ್ದಿಷ್ಟ ಕಾರ್ಯಕ್ರಮ ಯೋಜನೆಯೊಂದಕ್ಕೆ ಸಹಾಯವಾಗುವಂತೆ, ಆಯಾ ವಿದ್ಯಾರ್ಥಿಗೆ ಈ ಫೆಲೋಷಿಪ್‌ನ್ನು ನೀಡಲಾಗುತ್ತದೆ. ಹಾಗೆ ಸೂಚಿಸುವ ನಿರ್ದಿಷ್ಟ ಕಾರ್ಯಕ್ರಮವು ಕನಿಷ್ಠ ೧ ತಿಂಗಳು ಅಥವಾ ಗರಿಷ್ಠ ೩ ತಿಂಗಳ ಒಳಗೆ ಪೂರೈಸುವಂಥದಾಗಿರಬೇಕು.
  • ‘ಬಿ.ಸಿ.ಎಸ್. ಅಯ್ಯಂಗಾರ್ ಫೆಲೋಷಿಪ್’‌ನ್ನು ಯಾವುದೇ ಹಳೆಯ ವಿದ್ಯಾರ್ಥಿಗೂ ಮತ್ತು `ಪ್ರಮೀಳಾ ಸ್ವಾಮಿ ಫೆಲೋಷಿಪ್ನ್ನು ಮಹಿಳಾ ಅಭ್ಯರ್ಥಿಗೂ ನೀಡಲಾಗುತ್ತದೆ.
  • ಅರ್ಹ ಕಾರ್ಯಯೋಜನೆಗಳ ಒಂದು ಸೂಚಕ ಪಟ್ಟಿ ಹೀಗಿದೆ:
    • ಹೊಸ ನಾಟಕ ಪ್ರಯೋಗವೊಂದನ್ನು ವಿಶೇಷ ತರಬೇತಿಯೊಂದಿಗೆ ಪ್ರದರ್ಶನಕ್ಕೆ ಸಿದ್ಧಪಡಿಸುವುದು
    • ಅಪರೂಪದ ರಂಗತರಬೇತಿ ಶಿಬಿರವೊಂದನ್ನು ನಡೆಸುವುದು
    • ರಂಗಾಧ್ಯಯನದ ಉದ್ದೇಶದಿಂದ ಕರ್ನಾಟಕ ಅಥವಾ ಹೊರಗಿನ ತಂಡ ಅಥವಾ ತಜ್ಞರಿಂದ ತರಬೇತಿ ಪಡೆಯುವುದು
    • ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಕ್ಕೆ ಅಧ್ಯಯನೋದ್ದೇಶದ ಪ್ರವಾಸ ಮಾಡುವುದು
    • ರಂಗಕರ್ಮಕ್ಕೆ ಸಂಬಂಧಿಸಿ ಸಂಶೋಧನೆ-ದಾಖಲಾತಿ-ಬರವಣಿಗೆ ನಡೆಸುವುದು
    • ರಂಗಭೂಮಿ ಮತ್ತು ಬೇರೆ ಕಲೆಗಳ ಸಹಯೋಗವುಳ್ಳ ಪ್ರಯೋಗಗಳಲ್ಲಿ ತೊಡಗಿಕೊಳ್ಳುವುದು
    • ಇವುಗಳಲ್ಲದೆ, ರಂಗಭೂಮಿಯ ಆವಿಷ್ಕಾರ-ಅನುಭವವನ್ನು ವಿಸ್ತರಿಸುವ ಯಾವುದೇ ಹೊಸ ಯೋಜನೆಯೂ ಅರ್ಹ.
  • ಆಯಾ ಯೋಜನೆಗಳ ಕೆಲಸದ ಸ್ವರೂಪ ಮತ್ತು ಸಮಯವ್ಯಾಪ್ತಿಯನ್ನು ಆಧರಿಸಿ ಕನಿಷ್ಠ ೧ ತಿಂಗಳು ಮತ್ತು ಗರಿಷ್ಠ ೩ ತಿಂಗಳ ನಡುವೆ ಈ ಕಾರ್ಯಯೋಜನೆಯು ಮುಗಿಯಬೇಕು. ಪ್ರತಿವರ್ಷವೂ ರೂ. ೫೦,೦೦೦ ಮೊತ್ತವನ್ನು ಒಳಗೊಂಡ ಎರಡು-ಮೂರು ಫೆಲೋಷಿಪ್ ನೀಡಲಾಗುತ್ತದೆ.

 

ಫೆಲೋಷಿಪ್‌ಗೆ ಬೇಡಿಕೆ ಸಲ್ಲಿಸುವ ಕ್ರಮ:

  • ಆಗಸ್ಟ್ ತಿಂಗಳಲ್ಲಿ ಈ ಫೆಲೋಷಿಪ್‌ನ ಪ್ರಕಟಣೆ ನೀಡಲಾಗುತ್ತದೆ. ನೀನಾಸಮ್ ಅಂತರ್ಜಾಲದ ತಾಣದಲ್ಲಿ ಮತ್ತು ಬೇರೆ ಮಾಧ್ಯಮಗಳಲ್ಲಿ ಇದಕ್ಕೆ ಪ್ರಚಾರ ಕೊಡಲಾಗುತ್ತದೆ.
  • ನೀನಾಸಮ್ ರಂಗಶಿಕ್ಷಣಕೇಂದ್ರದಲ್ಲಿ ಉತ್ತೀರ್ಣರಾದ ಮತ್ತು ೨೦೨೨ ಆಗಸ್ಟ್ ತಿಂಗಳಿಗೆ ೪೦ ವರ್ಷ ವಯಸ್ಸು ಮೀರಿರದ ಯಾರೂ ಈ ಫೆಲೋಷಿಪ್‌ಗೆ ಬೇಡಿಕೆ ಸಲ್ಲಿಸಬಹುದು.
  • ಬೇಡಿಕೆ ಪತ್ರವನ್ನು ಖಾಲಿ ಕಾಗದದ ಮೇಲೆ ಈ ಕೆಳಕಂಡ ವಿವರಗಳೊಂದಿಗೆ ಅಂಚೆಯಲ್ಲಿ ಅಥವಾ ಈ-ಮೈಲ್ ಮೂಲಕ ಸಲ್ಲಿಸಬಹುದು:
    • ಬೇಡಿಕೆ ಸಲ್ಲಿಸುತ್ತಿರುವವರ ಹೆಸರು, ಪೂರ್ಣ ವಿಳಾಸ, ಚರ ದೂರವಾಣಿ ಸಂಖ್ಯೆ ಮತ್ತು ಈ-ಮೈಲ್ ವಿಳಾಸ
    • ಲಿಂಗ, ಹುಟ್ಟಿದ ದಿನಾಂಕ ಮತ್ತು ವಯಸ್ಸು
    • ಪ್ರಸ್ತುತ ಉದ್ಯೋಗ ಮತ್ತು ವೃತ್ತಿ
    • ನೀನಾಸಮ್ ರಂಗಶಿಕ್ಷಣಕೇಂದ್ರದ ತರಬೇತಿಯ ಅನಂತರ ಮಾಡಿರುವ ಪ್ರಮುಖ ಕೆಲಸಗಳು ಮತ್ತು ಪಡೆದ ಮನ್ನಣೆಗಳು (೧ ಪುಟ)
    • ಫೆಲೋಷಿಪ್‌ಗೆ ಬೇಡಿಕೆ ಸಲ್ಲಿಸುತ್ತಿರುವ ನಿರ್ದಿಷ್ಟ ಕಾರ್ಯಯೋಜನೆಯ ವಿವರಗಳು: ರೂಪುರೇಷೆ, ಹಿನ್ನೆಲೆ, ಉದ್ದೇಶ, ಕಾರ್ಯಕ್ರಮದ ವಿವರಗಳು ಮತ್ತು ಕಾಲಾವಧಿ, ಎಲ್ಲಿ ಯಾವಾಗ ಯಾರೊಂದಿಗೆ ಹೇಗೆ ಕೆಲಸ ಮಾಡಲು ಉದ್ದೇಶಿಸಿದ್ದೀರಿ ಇತ್ಯಾದಿ ವಿವರಗಳು, ಮತ್ತು ಈ ಕಾರ್ಯಯೋಜನೆಯಿಂದ ನಿಮಗೆ ಮತ್ತು ವಿಶಾಲ ರಂಗಭೂಮಿಗೆ ಏನೆಲ್ಲ ಅನುಕೂಲಗಳಾಗಬಹುದು ಎಂಬುದರ ಸೂಚನೆ ಇತ್ಯಾದಿ (೨-೩ ಪುಟ)
    • ಕಾರ್ಯಯೋಜನೆಯ ಆಯವ್ಯಯ ಅಂದಾಜು. ಬೇರೆ ಸಹಾಯಮೂಲಗಳಿದ್ದರೆ ಅದನ್ನೂ ನಮೂದಿಸಿ.
    • ನೀನಾಸಮ್ ರಂಗಶಿಕ್ಷಣಕೇಂದ್ರದಲ್ಲಿ ಓದಿದ್ದಕ್ಕೆ ಅಂಕಪಟ್ಟಿ, ಪ್ರಮಾಣಪತ್ರದಂಥ ಒಂದು ದಾಖಲೆಯ ಛಾಯಾಪ್ರತಿ.
  • ಬೇಡಿಕೆಯನ್ನು ನಮಗೆ ತಲುಪಿಸುವ ಕಡೆಯ ದಿನಾಂಕ ಮುಗಿದಿದೆ.

 

ನಿರ್ವಹಣೆಯ ವಿವರಗಳು:

  • ನೀನಾಸಮ್ ಪ್ರತಿಷ್ಠಾನದ ಒಬ್ಬರು, ನೀನಾಸಮ್ ರಂಗಶಿಕ್ಷಣಕೇಂದ್ರದ ಮುಖ್ಯಸ್ಥರು ಮತ್ತು ಹೊರಗಿನ ತಜ್ಞರು ಕೂಡಿರುವ ಒಂದು ಆಯ್ಕೆ ಸಮಿತಿಯು ಎಲ್ಲ ಬೇಡಿಕೆಗಳನ್ನೂ ಕಾರ್ಯಯೋಜನೆಗಳನ್ನೂ ಪರಿಶೀಲಿಸಿ ಯಾರಿಗೆ ಫೆಲೋಷಿಪ್ ನೀಡಬಹುದೆಂದು ನಿರ್ಧರಿಸುತ್ತದೆ.
  • ಅಗತ್ಯವಿದ್ದರೆ ಈ ಸಮಿತಿಯ ಸದಸ್ಯರು ದೂರವಾಣಿ ಮೂಲಕ ಅಥವಾ ಮೌಖಿಕವಾಗಿ ಆಯಾ ಬೇಡಿಕೆದಾರರಿಂದ ಹೆಚ್ಚಿನ ಮಾಹಿತಿ ಮತ್ತು ಸ್ಪಷ್ಟೀಕರಣ ಪಡೆಯುತ್ತಾರೆ.
  • ನವೆಂಬರ್ ೨೦೨೨ರಲ್ಲಿ ತೀರ್ಮಾನಗಳನ್ನು ಪ್ರಕಟಗೊಳಿಸಿ ತಿಳಿಸಲಾಗುತ್ತದೆ. ಅದೇ ತಿಂಗಳ ಕೊನೆಯೊಳಗೆ ಒಂದೇ ಕಂತಿನಲ್ಲಿ ರೂ. ೫೦,೦೦೦ ಮೊತ್ತವನ್ನು ಆಯ್ಕೆಯಾದ ವ್ಯಕ್ತಿಯ ಬ್ಯಾಂಕ್ ಖಾತೆಗೆ ಕಳಿಸಲಾಗುತ್ತದೆ.
  • ೧ ರಿಂದ ೩ ತಿಂಗಳುಗಳ ನಡುವಿನ ಒಪ್ಪಿತ ಅವಧಿಯು ಮುಗಿದ ೩೦ ದಿನಗಳೊಳಗೆ ಫೆಲೋಷಿಪ್ ಪಡೆದವರು ೩-೪ ಪುಟಗಳ ಒಂದು ವರದಿಯನ್ನೂ ಫೋಟೋ-ಬ್ರೋಷರ್ ಇತ್ಯಾದಿ ಕೆಲವು ದಾಖಲೆಗಳನ್ನೂ ಸಲ್ಲಿಸಬೇಕು. ಖರ್ಚುವೆಚ್ಚದ ಲೆಕ್ಕಗಳನ್ನೂ ಬಳಕೆ ಪ್ರಮಾಣಪತ್ರವನ್ನೂ ನೀಡಬೇಕಾದ ಅಗತ್ಯ ಇಲ್ಲ.
  • ಫೆಲೋಷಿಪ್ ಸಹಾಯದಿಂದ ನಡೆದ ಕಾರ್ಯಕ್ರಮಗಳ ಪ್ರಕಟಣೆಯಲ್ಲಿ ಈ ಸಹಾಯವನ್ನು ಉಲ್ಲೇಖಿಸುವುದು ಅಗತ್ಯ.